Font Problem

       
 
 
 

ಸಣ್ಣ ಕಥೆಗಳು

 
 



ನಿನ್ನಯ ಮಹಿಮೆಯ ಹಾಡಲು ಮನದಲಿ ಸಂತಸ ಮೂಡುವುದು |
ಪ್ರೀತಿಯ ಅಪ್ಪುಗೆಯಂದದಿ ಬಾಯಿ ಚಪ್ಪರಿಸುವುದು ||೧||
ಹಕ್ಕಿಯೊಂದು ತನ್ನ ಮರಿಯೊಂದಿಗೆ ಮರದಮೇಲೆ ಕುಳಿತಿತ್ತು |
ಅಲ್ಲಿಗೆ ಬಂದ ಬೇಡನಿಗದು ಕಂಡಿತು ||ಪ||
ಹದ್ದು ಹೆದರಿ ಮುಗಿಲಿಗೆ ನೆಗೆಯಿತು |
ಬೇಡನ ಬಾಣವು ಹಕ್ಕಿಗೆ ಗುರಿ ಇಕ್ಕಿತು ||೨||
ಆಗ ಆ ಹಕ್ಕಿಗಳು ನಿನ್ನನು ನೆನೆದವು |
ಶ್ರೀಹರಿ ಧಾವಿಸಿ ಬಾರಪ್ಪ ಎಂದವು ||೩||
ಮುಗಿಲಿಗೆ ನೆಗೆದರೆ ಹದ್ದು ಹಿಡಿವುದು |
ಮರದ ಮೇಲಿದ್ದರೆ ಬಾಣ ಇರಿವುದು ||೪||
ದೇವನು ಹಕ್ಕಿಗಳ ಮೊರೆಯ ಕೇಳಿದನು |
ಹಾವಿನ ರೂಪವ ತಾ ತೊಟ್ಟುಕೊಂಡನು ||೫||
ಹಾವು ಬೇಡನ ಕಚ್ಚಿ ಕೆಳಗುರುಳಿಸಿತು |
ಹೊರಟ ಬಾಣವು ಹದ್ದನಿರಿಯಿತು ||೬||
ನಿನ್ನ ದಾಸರಿಗೆಲ್ಲ ಕೃಪಾಳು ನೀನು |
ಕಾಪಾಡುವೆ ಸಂಕಟದಿ ಅವರನು ||೭||
ತ್ರಿಭುವನದಲೂ ನಿನ್ನಯ ಕೀರ್ತಿಯನು |
ಬಣ್ಣಿಸಲಾಗದು ವೇದವಾಣಿಗೂ ತುಕಾ ಎಂದನು ||೮||

--


ಕೃಪಾವಂತ ನೀ ದಯಾವಂತನು ಪಾಮರ ನಾನು |
ಏನೆಂದು ಬಣ್ಣಿಸಲಿ ನಿನ್ನಯ ಹಿರಿಮೆಯನು ||೧||
ಇನ್ನೆಲ್ಲೂ ಕಾಣಲಾಗದಂತಹ ದಯಾವಂತನು |
ಒಂದು ಅಚ್ಚರಿಯಾಗಿ ತೋರುವ ಹೃಷಿಕೇಶ ನೀನು ||ಪ||
ಕುರುಕ್ಷೇತ್ರದಿ ಹಕ್ಕಿಯೊಂದಕ್ಕೆ ಮರಿ ಹುಟ್ಟಿತು |
ಮರಿಗಾಗಿ ಅದು ಹುಲ್ಲ ಮೆತ್ತೆಯನು ಒದಗಿಸಿತು ||೨||
ಒಂದು ದಿನ ಅಲ್ಲಿ ರಣಕಂಬವನು ನೆಡಲಾಯಿತು |
ಆ ಬಯಲನು ರಣಭೂಮಿಯೆಂದು ಘೋಷಿಸಲಾಯಿತು ||೩||
ಹಿರಿದಾದ ಪಾಂಡವ ಕೌರವ ಪಡೆಗಳವು |
ಕಾಳಗಕೆಂದು ಅಲ್ಲಿಗೆ ಬಂದು ನಿಂತವು ||೪||
ಹೌಹಾರಿದ ಹಕ್ಕಿ ನಿನ್ನನು ನೆನೆಸಿತು |
ಕಾಪಾಡು ಶ್ರೀಪತಿಯೆ ನಮ್ಮನೆಂದಿತು ||೫||
ಆನೆ ಕುದುರೆಗಳು ಇಲ್ಲಿ ಓಡಾಡಲಿವೆ |
ಕಾಲಿಗೆ ಸಿಕ್ಕು ಕಲ್ಲುಗಳು ಹುಡಿಯಾಗಲಿವೆ ||೬||
ಹೇಗೆ ಬದುಕಲಿ ಇಂಥ ಕೋಲಾಹಲದಲಿ |
ಧಾವಿಸಿ ಬಾ ಶ್ರೀಹರಿಯೆ ಬಲು ಬೇಗದಲಿ ||೭||
ನನ್ನ ಮರಿಯನು ತೊರೆದು ಇನ್ನೆಲ್ಲಿಗೆ ಹೋಗಲಿ |
ಪ್ರಸನ್ನನಾಗು ಎಲೆ ಜಗನ್ನಾಥ ಲಗುಬಗೆಯಲಿ ||೮||
ಆಗ ಅನಾಥನಾಥ ನಾರಾಯಣ ನೀನು |
ಆದೆ ಬಲು ಕೃಪಾವಂತನು ||೯||
ಆನೆಯ ಕೊರಳಿಗೆ ನೇತಾಡುವ ಗಂಟೆಯೊಂದನು |
ಹಗುರಾಗಿ ಕೆಡವಿದೆ ಹಕ್ಕಿಗಳ ಮೇಲದನು ||೧೦||
ಹದಿನೆಂಟು ದಿನಗಳ ಕಾಳಗ ನಡೆಯಿತಲ್ಲಿ |
ಹಕ್ಕಿಗಳಿಗೆ ಗಾಳಿ ಬಿಸಿಲುಗಳು ಕೂಡ ತಾಕಲಿಲ್ಲ ||೧೧||
ಯುದ್ಧ ಮುಗಿದು ನಾರಾಯಣನು |
ಹಕ್ಕಿಗಳನು ಅರ್ಜುನಗೆ ತೋರಿಸಿದನು ||೧೨||
ಕಂಡೆಯ ನನ್ನ ಈ ದಾಸರನು |
ರಣರಂಗದಲೂ ಅವನ್ನು ಕಾಪಾಡಿದೆನು ||೧೩||
ಭಕ್ತರಮೇಲೆ ಮಮತೆಯುಳ್ಳವ ನೀನು |
ನೀನೆನಗೆ ತಾಯಿ ತುಕಾ ಎನ್ನುವನು ||೧೪||