Font Problem

       
 
 
 

ಲಾಂಗ್‌ಮನ್ ವಿಶ್ವ ಸಾಹಿತ್ಯದ ಮಾನವ ಶಾಸ್ತ್ರ ವಿಶ್ವಕೋಶದಿಂದ ಉದ್ಧರಣೆ

 
 
ಸಂಪಾದಕರ ಟಿಪ್ಪಣಿ:  

ಬಗೆಬಗೆಯ ಕೃತಿಗಳನ್ನು ಬೇರೆ ಬೇರೆ ಕಾಲ ಹಾಗೂ ದೇಶಗಳಲ್ಲಿ ಸಾಹಿತ್ಯಕೃತಿಗಳೆಂದು ಪರಿಗಣಿಸಲಾದುದರಿಂದ ನಾವು ಅವುಗಳನ್ನು ಸೇರ್ಪಡಿಸಬೇಕೆಂದುಕೊಂಡೆವು. ಇವುಗಳಲ್ಲಿ ಕವಿತೆ, ನಾಟಕ ಮತ್ತು ಲಲಿತ ಗದ್ಯಗಳಲ್ಲದೆ ಮುಂದಿನ ಕಾಲದ ಸಾಹಿತ್ಯಕೃತಿಗೆ ತುಂಬ ಮಹತ್ವದ್ದೆನ್ನಿಸಿದ ಸಮೃದ್ಧವಾದ ಐತಿಹಾಸಿಕ, ಧಾರ್ಮಿಕ ಮತ್ತು ತತ್ವಶಾಸ್ತ್ರಗಳ ಗ್ರಂಥಗಳಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ವಿಶ್ವ

ಮಟ್ಟದಲ್ಲಿ ಹೆಸರಾದ ಇಲ್ಲವೆ ಇತ್ತೀಚೆಗಷ್ಟೆ ಮರುಶೋಧಿಸಲಾದ ಕೃತಿಗಳನ್ನುಳಿದು ಇನ್ನೇನನ್ನೂ ಸೇರ್ಪಡಿಸಲಾಗಿಲ್ಲ.
ಡೇವಿಡ್ ಡ್ಯಾಮ್‌ರಾಸ್ಕ್ (David Damrosch)

      ತುಕಾರಾಮರು ಹದಿನೇಳನೆಯ ಶತಮಾನದ ಪೂರ್ವಾರ್ಧದಲ್ಲಿ ಪಶ್ಚಿಮ ಭಾರತದ ಮಹಾರಾಷ್ಟ್ರ ಪ್ರಾಂತದ ಒಂದು ಕೃಷಿಕರ ಕುಟುಂಬದಲ್ಲಿ ಜನಿಸಿದರು. ಅವರು ಮರಾಠಿ ಭಾಷೆಯಲ್ಲಿ ಬರೆಯುತ್ತಿದ್ದರು. ತಮ್ಮ ತಪ್ಪೊಪ್ಪಿಗೆಯ ಹಲವು ಕವನಗಳ ಮೂಲಕ ಅವರು ಬಹಳಷ್ಟು ಜನ ಕವಿಗಳ ಆಶೋತ್ತರಗಳಿಗೆ ಧ್ವನಿಯನ್ನು ಒದಗಿಸಿದರು. ಅವುಗಳಲ್ಲಿ ಒಂದು ಹೀಗಿದೆ:
ನನ್ನಲ್ಲಿ ಇಲ್ಲ
ಯಾವ ವೈಯಕ್ತಿಕ ಕೌಶಲ.
ವಿಶ್ವಾತ್ಮಕನಾದ ಅವನೇ ನನ್ನಿಂದ
ಮಾತನಾಡಿಸುತ್ತಾನೆ.
ತುಕಾರಾಮರು ಇಂದಿನ ಮಧ್ಯ ಭಾರತದ ಮಹಾರಾಷ್ಟ್ರ ಪ್ರಾಂತದ ಒಂದು ಹಳ್ಳಿಯ ಒಂದು ಒಕ್ಕಲಿಗರ ಕುಟುಂಬದಲ್ಲಿ ಜನ್ಮತಳೆದರು. ಅವರು ಇಪ್ಪತ್ತನೆಯ ವಯಸ್ಸಿನವರಾಗುವ ಹೊತ್ತಿಗೆಂದರೆ ಬರ ಹಾಗೂ ಮಾರಿಬೇನೆಗಳಿಂದ ತಮ್ಮ ಹೆತ್ತವರು ಹಾಗೂ ಒಬ್ಬ ಮಡದಿಯನ್ನು ಕಳೆದುಕೊಂಡರು. ಅವರು ಈ ಜಗತ್ತನ್ನು ತ್ಯಜಿಸಿದರು. ಅವರು ಬರೆದ ತೀರ ವಯಕ್ತಿಕವಾದ ಕವನಗಳೆಲ್ಲ ಹೆಚ್ಚಾಗಿ ಮಹಾರಾಷ್ಟ್ರದ ಪಂಢರಪುರವೆಂಬ ಹಳ್ಳಿಯಲ್ಲಿ ಪೂಜಿಸಲಾಗುವ ವಿಠ್ಠಲನೆಂಬ ಹೆಸರಿನ ವಿಷ್ಣುವನ್ನು ಗೌರವಿಸಿ ಬರೆಯಲಾದವುಗಳು.

* * *

      ದಿಲಿಪ ಚಿತ್ರೆ ಅವರು ಅನುವಾದಿಸಿದ ತುಕಾರಾಮರ ಈ ಕೆಳಗಿನ ಒಂಬತ್ತು ಅಭಂಗಗಳನ್ನು ವಿಶ್ವಕೋಶದಲ್ಲಿ ಸೇರ್ಪಡಿಸಲಾಗಿದೆ.

      ನಾಮದೇವರು ಮತ್ತು ಪಾಂಡುರಂಗರು ಕನಸಿನಲ್ಲಿ ಬಂದು ಅಭಂಗದ ಕವಿತ್ವವನ್ನು ಮಾಡಬೇಕೆಂದು ಸ್ವಾಮಿಯವರಿಗೆ ಅಪ್ಪಣೆಯನ್ನಿತ್ತರು.

[೧]
ಪಾಂಡುರಂಗನ ಜೊತೆಗೆ ನಾಮದೇವರು | ಕನಸಿನಲಿ ಬಂದು ನನ್ನನೆಚ್ಚರಿಸಿದರು ||೧||
ಸುಮ್ಮನೆ ನಿಮಿತ್ತವನು ಹೇಳದೆ ನಿನು | ಮಾಡು ಎಂದರು ಕವಿತ್ವವನು ||ಪ||
ವಿಠ್ಠಲನು ಅಳತೆಗೋಲನು ಹಿಡಿದಿಹನು | ಎನ್ನುತ್ತ ತಟ್ಟಿ ನನ್ನನು ಎಚ್ಚರಿಸಿದರು ||೨||
ಸುಮ್ಮನೆ ನಿಮಿತ್ತವನು ಹೇಳದೆ ನಿನು | ಮಾಡು ಎಂದರು ಕವಿತ್ವವನು ||ಪ||
ನೂರುಕೋಟಿ ಸಂಖ್ಯೆಯನು ಹೇಳಿದರು | ತುಕಾ, ಉಳಿದುದನು ಪೂರ್ತಿಗೊಳಿಸೆಂದರು ||೩||
ಸುಮ್ಮನೆ ನಿಮಿತ್ತವನು ಹೇಳದೆ ನಿನು | ಮಾಡು ಎಂದರು ಕವಿತ್ವವನು ||ಪ||

      ಅರ್ಥ :-೧. ನಾಮದೇವರು ಪಾಂಡುರಂಗನೊಡನೆ ನನ್ನ ಕನಸಿನಲ್ಲಿ ಬಂದು ನನ್ನನ್ನು ಎಬ್ಬಿಸಿದರು. ನೀನು ಕವಿತ್ವವನ್ನು ಮಾಡಬೇಕು, ಸುಮ್ಮನೆ ವ್ಯರ್ಥವಾಗಿ ಬಡಬಡಿಸಕೂಡದು, ಎಂದು ನುಡಿದು ಅವರು ನನಗೆ ಕವಿತೆಯನ್ನು ಮಾಡುವ ಕೆಲಸವನ್ನು ಹೇಳಿದರು. ೨. ವಿಠ್ಠಲನು ಅಳತೆಗೋಲನ್ನು ಹಿಡಿದುಕೊಂಡಿರುವನು. ನೀನು ಅಳತೆ ಸರಿಹೊಂದುವಂತೆ ಅಭಂಗಗಳನ್ನು ತಯಾರಿಸು, ಎಂದು ಬೆನ್ನು ತಟ್ಟಿ ನನ್ನನ್ನು ಎಚ್ಚರಿಸಿದರು. ೩. ನಾಮದೇವರು ಒಂದು ನೂರು ಕೋಟಿ ಅಭಂಗಗಳನ್ನು ಬರೆಯಲು ತೀರ್ಮಾನಿಸಿದ್ದರಂತೆ. ಆಗದೆ ಉಳಿದವುಗಳನ್ನು ಬರೆದು ಪೂರ್ತಿಗೊಳಿಸು, ಎಂದರೆಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.

      ವಿವರಣೆ :- ತುಕಾರಾಮ ಮಹಾರಾಜರ ಕವಿತ್ವದ ಪ್ರೇರಣೆಯನ್ನು ಕುರಿತಾದ ಮಹತ್ವದ ಅಭಂಗವಿದು. ನಾಮದೇವರು ಒಂದು ನೂರು ಕೋಟಿ ಅಭಂಗಗಳನ್ನು ಬರೆಯುವೆನೆಂದು ಪ್ರತಿಜ್ಞೆ೦iiನ್ನು ಮಾಡಿದ್ದರು. ಅದು ಪೂರ್ತಿಯಾಗಲಿಲ್ಲ. ಅವರು ವಿಠ್ಠಲನೊಂದಿಗೆ ತುಕಾರಾಮರ ಕನಸಿನಲ್ಲಿ ಬಂದು, ಅದನ್ನು ಪೂರ್ತಿಗೊಳಿಸೆಂದು ಹೇಳಿ, ಅವರಿಗೆ ಪ್ರೇರಣೆಯನ್ನು ನೀಡಿದರು. ಮಾತುಗಳನ್ನು ಸುಮ್ಮನೆ ಖರ್ಚು ಮಾಡುವ ಬದಲು ಕವಿತ್ವಕ್ಕಾಗಿ ಅವನ್ನು ಬಳಸಿಕೊಳ್ಳಬೇಕೆಂದು ನಾಮದೇವರು ತುಕಾರಾಮರ ಬೆನ್ನು ತಟ್ಟಿ ಎಚ್ಚರಿಸಿದರು. ಹೀಗಾಗಿ ತುಕಾರಾಮರ ಅಭಂಗ ರಚನೆಯ ಹಿಂದೆ ನಾಮದೇವರ ಪ್ರೇರಣೆಯಿದೆ. ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮರ ಪರಂಪರೆಯು ಒಂದೇ ಆಗಿದೆ. ಅವರೆಲ್ಲರ ಕರ್ತೃತ್ವದಿಂದ ಭಾಗವತ ಧರ್ಮದ ಕಟ್ಟಡದ ಕೆಲಸವು ನಡೆಯಿತು. ಏಕನಾಥರು ಜ್ಞಾನೇಶ್ವರರ ಕಾರ್ಯ ಮತ್ತು ತತ್ವಜ್ಞಾನಗಳ ಇಳಿಗಾಲದಲ್ಲಿ ಜ್ಞಾನೇಶ್ವರಿಯ ಪುನರುದ್ಧಾರದ ಮೂಲಕ ಅವುಗಳ ವಿಸ್ತಾರವನ್ನು ಮಾಡಿದರು. ತುಕಾರಾಮರು ನಾಮದೇವರ ಭವಭಕ್ತಿಯ ಪ್ರಸಾರವನ್ನು ಇನ್ನಷ್ಟು ಮಾಡಿದರು. ವಾರಕರಿ ಸಂಪ್ರದಾಯದಲ್ಲಿ ಈ ಬಗೆಯ ಶ್ರದ್ಧೆಯಿದೆ. ಅದು ಇತಿಹಾಸದೊಂದಿಗೆ ಸರಿಹೊಂದುತ್ತದೆ. ’ನಾಮ್ಯಾನ ತುಕಾ ಮತ್ತು ಜ್ಞಾನ್ಯಾನ (ಜ್ಞಾನದೇವ) ಏಕಾ (ಏಕನಾಥ)’, ಎಂಬ ಸಾಂಪ್ರದಾಯಿಕವಾದ ಗಾದೆಮಾತಿನಲ್ಲಿ ಈ ಸಂಕೇತವು ಸ್ಪಷ್ಟವಾಗಿದೆ. ನಾಮದೇವ ಹಾಗೂ ತುಕಾರಾಮರ ಕವಿತ್ವದಲ್ಲಿ ಹಲವು ಸಂಗತಿಗಳ ಬಗೆಯಲ್ಲಿ ಇರುವ ಸಾಮ್ಯವನ್ನು ಕಂಡು ಈ ತಿಳುವಳಿಕೆಗೆ ಬಲ ಬರುತ್ತದೆ. ಅವರಿಬ್ಬರ ಪ್ರಾಪಂಚಿಕ ಜೀವನ, ಭಕ್ತಿಪ್ರವಣತೆ, ಸಗುಣದ ಬಗೆಗಿನ ಸೆಳೆತ, ದೇವನನ್ನು ಕುರಿತಾದ ಸಲುಗೆಯ ತಳಮಳ ಮತ್ತು ಹೃದಯವನ್ನು ತಟ್ಟುವ ಆರ್ತತೆಗಳನ್ನು ಕಂಡು, ತುಕಾರಾಮರು ನಾಮದೇವರ ಪ್ರೇರಣೆಯಿಂದಲೇ ಅವರ ಕಾರ್ಯವನ್ನು ಮುಂದುವರೆಸಿದರೆಂಬ ಸಂಗತಿಯನ್ನು ಮನಗಾಣು ವಂತಿದೆ.

      ಇದೊಂದೇ ಅಭಂಗದ ಎರಡು-ಮೂರು ಮುಖ್ಯ ಸಂಗತಿಗಳನ್ನು ಗಮನಕ್ಕೆ ತಂದುಕೊಳ್ಳು ವಂತಿದೆ. ಮರಾಠಿಯ ಅಭಂಗದಲ್ಲಿ ’ಸಳ’ ಎಂಬ ಪದವನ್ನು ಬಳಸಲಾಗಿದೆ, ಹಲವರು ಅದನ್ನು ಅಭಿಮಾನ, ಸಾಮರ್ಥ್ಯ, ಎಂದು ಅರ್ಥೈಸಿದ್ದಾರೆ. ’ನೀನು ಕವಿತ್ವದ ಅಳತೆಯನ್ನು ಪೂರ್ತಿಗೊಳಿಸಬೇಕು’, ಎಂದು ಶ್ರೀವಿಠ್ಠಲನು ಒತ್ತಾಯ ಇಲ್ಲವೆ ಅಭಿಮಾನವನ್ನು ತಳೆದಿರುವನೆಂಬ ಅರ್ಥವನ್ನು ಹಲವೆಡೆಯಲ್ಲಿ ನಮೂದಿಸಲಾಗಿದೆ. ಅದರ ಬದಲು ಕಾಳುಗಳನ್ನು ಅಳೆಯುವ ಸೇರಿನಂತಹ ಒಂದು ಸಾಧನ, ಎಂಬ ಅರ್ಥವು ಹೆಚ್ಚು ಸರಿಯೆಂದು ಕಾಣುತ್ತದೆ. ’ನೀನು ಕವಿತೆಯನ್ನು ಮಾಡಿ ನಾಮದೇವನ ಪ್ರತಿಜ್ಞೆಯನ್ನು ಪೂರ್ತಿಗೊಳಿಸು. ಆ ಅಳತೆಯನ್ನು ಪೂರ್ತಿಯಾಗಿ ತುಂಬು. ವಿಠ್ಠಲನು ಅಳತೆಯ ಪಾತ್ರೆಯನ್ನು ಹಿಡಿದುಕೊಂಡು ಅಳೆತದ ಕೆಲಸವನ್ನು ಮಾಡಲು ಸಿದ್ಧನಾಗಿ ನಿಂತಂತಿದೆ’, ಎನ್ನುವ ಅರ್ಥವು ಹೆಚ್ಚು ಸೂಕ್ತವಾದುದು, ಎನ್ನಿಸುತ್ತದೆ. ಎರಡನೆಯ ಸಂಗತಿಯೆಂದರೆ, ನಾಮದೇವರು ಶತಕೋಟಿ ಅಭಂಗಗಳನ್ನು ಕಟ್ಟುವ ಪ್ರತಿಜ್ಞೆಯನ್ನು ಮಾಡಿದ್ದರೆ? ಅದು ಅಪೂರ್ಣವಾಗಿ ಉಳಿಯಲು ಕಾರಣವೇನು? ಅವರು ಎಷ್ಟು ಅಭಂಗಗಳನ್ನು ರಚಿಸಿದರು? ಪ್ರತಿಜ್ಞೆಯಿಂದ ಉಳಿದವುಗಳೆಷ್ಟು? ತುಕಾರಾಮರು ಎಷ್ಟು ಅಭಂಗಗಳನ್ನು ರಚಿಸಿ ಆ ಪ್ರತಿಜ್ಞೆಯನ್ನು ಪೂರ್ತಿಗೊಳಿಸಿದರು?-ಎನ್ನುವ ಅದೆಷ್ಟೋ ಪ್ರಶ್ನೆಗಳು ನಮ್ಮ ಮುಂದೆ ನಿಲ್ಲುತ್ತವೆ. ಒಂದೆಂದರೆ, ನೂರು ಕೋಟಿ ಅಭಂಗಗಳೆಂದರೆ ಅತಿಶಯೋಕ್ತಿಯ ಸಂಖ್ಯೆ ಅಲ್ಲವೆ? ಈಶ್ವರನ ಪೂರ್ತಿ ಕೃಪೆ ಹಾಗೂ ಮಾನವನ ಮನಸ್ಸಿನ ಸಾಮರ್ಥ್ಯಗಳನ್ನು ಇಡಿಯಾಗಿ ಗಮನಕ್ಕೆ ತಂದುಕೊಂಡರೂ ಒಂದು ನೂರು ಕೋಟಿ ಅಭಂಗಗಳು ಒಂದೆರಡು ಜನ್ಮಗಳಲ್ಲಾದರೂ ಪೂರ್ತಿಗೊಳ್ಳಲು ಸಾಧ್ಯವೆ? ಈಶ್ವರನ ಪ್ರಸಾದದ ಅದ್ಭುತವಾದ ಪವಾಡವನ್ನು ಒಪ್ಪಿಕೊಂಡರೂ ಒಂದು ನೂರು ಕೋಟಿ ಅಭಂಗಗಳನ್ನು ಹೇಗೆ ಲೆಕ್ಖ ಮಾಡುವುದು? ಅಥವಾ ಇದು ಮಾತಿನ ಒಂದು ಪದ್ಧತಿ ಎನ್ನುವುದು? ನಾಮದೇವ-ತುಕಾರಾಮರು ಬಹಳಷ್ಟು ಅಭಂಗಗಳನ್ನು ಬರೆದರು, ಎನ್ನಬೇಕು? ಇಂದು ನಾಮದೇವ-ತುಕಾರಾಮರ ಎಂಟು-ಹತ್ತು ಸಾವಿರ ಅಭಂಗಗಳು ಇರುವಾಗ ಒಂದು ನೂರು ಕೋಟಿ ಅಭಂಗಗಳ ಸಂಖ್ಯೆಯ ಒಗಟನ್ನು ಒಡೆಯುವುದು ಹೇಗೆ?

      ಸಂತಚರಿತ್ರಕಾರರಾದ ಮಹಿಪತಿಬುವಾ ಇವರು ಭಕ್ತಿ಼ಲೀಲಾಮೃತದ ಮೂವತ್ತೆರಡನೆಯ ಅಧ್ಯಾಯದಲ್ಲಿ ನೂರು ಕೋಟಿ ಅಭಂಗಗಳ ಲೆಕ್ಖವನ್ನು ಕೊಡುವಾಗ ನಾಮದೇವರು ೯೪ ಕೋಟಿ, ೪೦ ಲಕ್ಷ ಅಭಂಗಗಳನ್ನು ರಚಿಸಿ, ಕೊನೆಯಲ್ಲಿ ೯ ಲಕ್ಷ ಲಳಿತದ ಅಭಂಗಗಳನ್ನು ಮಾಡಿದರೆಂದೂ, ಉಳಿದ ೫ ಕೋಟಿ, ೫೧ ಲಕ್ಷ ಅಭಂಗಗಳನ್ನು ರಚಿಸಲು ತುಕೋಬರಿಗೆ ಹೇಳಿದರೆಂದೂ ಉಲ್ಲೇಖಿಸಿರುವರು. ಸಾಂಪ್ರದಾಯಿಕವಾದ ಈ ಲೆಕ್ಖವನ್ನು ಇನ್ನಷ್ಟು ಬಿಡಿಸಲು ಸಾಧ್ಯ. ’ವೇದಾಂಚೇ ಅಭಂಗ ಕೇಲೇ ಶ್ರುತಿಪರ’ ಎಂಬ ಒಂದು ಅಭಂಗದಲ್ಲಿ ನಾಮದೇವರ ೧ ಕೋಟಿ ಅಭಂಗಗಳು ಭಕ್ತಿಪರ, ೧ ಕೋಟಿ ಜ್ಞಾನಪರ, ೧ ಕೋಟಿ ಅನುಭವಪರ, ೭೫ ಲಕ್ಷ ವೈರಾಗ್ಯಪರ, ೭೫ ಲಕ್ಷ ನಾಮಪರ, ಎಂಬುದಾಗಿ ೪.೫ ಕೋಟಿ ಅಭಂಗಗಳ ತಪಸೀಲು ಅದರಲ್ಲಿದ್ದು ೬೦ ಸಾವಿರ ಉಪದೇಶಪರ, ೬೦ ಸಾವಿರ ರೂಪವರ್ಣನೆಗಳು, ಇನ್ನುಳಿದವುಗಳು ಬೇರೆ ವಿಷಯದವುಗಳು, ಎಂದು ಒಟ್ಟು ಸುಮಾರು ೫ ಕೋಟಿ, ೭೦ ಲಕ್ಷಗಳ ಲೆಕ್ಖವನ್ನು ಕೊಡುತ್ತಾರೆ. ಹೀಗಾಗಿ ಇವೆಲ್ಲ ಅತಿಶಯೋಕ್ತಿಗಳನ್ನು ಕಡೆಗಣಿಸಿ, ನಾಮದೇವ-ತುಕರಾಮರು ಬಹಳ ಅಭಂಗಗ ಳನ್ನು ರಚಿಸಿದರೆಂದು ತಿಳಿದುಕೊಂಡರೆ ಸಾಕು. ಈ ಸಂತಶ್ರೇಷ್ಠರ ಅಭಂಗಗಳಲ್ಲಿರುವ ಶ್ರೇಷ್ಠ ಅನುಭೂತಿ, ಈಶ್ವರನ ಬಗೆಗಿನ ಪ್ರೀತಿ, ತಳಮಳ, ಸಮಾಜದ ಬಗೆಗಿನ ಆಸ್ಥೆಗಳಿಗೆ ಇರುವ ಮಹತ್ವವನ್ನು ಅರಿತುಕೊಳ್ಳಬೇಕು. ಸಂಖ್ಯೆಯ ಪಶ್ನೆಯನ್ನು ಗೌಣವೆಂದು ಬಗೆದರೂ ಪರವಾಗಿಲ್ಲ. ಭಕ್ತಮಂಡಳಿಯಲ್ಲಿ ಆತ್ಮಚರ್ಚೆಯನ್ನು ಮಾಡುವಾಗ, ವಾಲ್ಮೀಕಿಯು ಶತಕೋಟಿ ಗ್ರಂಥರಚನೆಯನ್ನು ಮಾಡಿದ ವಿಷಯವು ಮುಂದೆ ಬಂದ ಕಾರಣ ನಾಮದೇವರಿಗೆ ನೂರು ಕೋಟಿ ಅಭಂಗಗಳನ್ನು ರಚಿಸುವ ಪ್ರೇರಣೆಯು ಬಂದಿತು. ವಾಲ್ಮೀಕಿಯು ನೂರು ಕೋಟಿ ಗ್ರಂಥಗಳನ್ನು ರಚಿಸಿ ತಮ್ಮ ಆಯುಷ್ಯವನ್ನು ಸಾರ್ಥಕಗೊಳಿಸಿದರು, ತಾವು ಮಾತ್ರ ತಮ್ಮ ಬಾಳನ್ನು ವ್ಯರ್ಥವಾಗಿ ಹಾಳುಮಾಡಿಕೊಳ್ಳುತ್ತಿದ್ದೇವೆ, ಎಂಬ ಭವನೆಯ ಅರಿವಿನಿಂದ ನಾಮದೇವರು ವಿಠ್ಠಲನಿಗೆ ಮೊರೆಹೋಗುತ್ತಾರೆ. ವಿಠ್ಠಲನು ಅವರಿಗೆ ತಿಳಿಹೇಳಿದನು. ಆಯುಷ್ಯವು ಕಡಿಮೆ ಇದ್ದ ಕಾರಣ ಅವರ ಸಂಕಲ್ಪವು ಪೂರ್ತಿಗೊಳ್ಳುವುದು ಹೇಗೆ?-ಎಂಬ ಸಂದೇಹವನ್ನು ವಿಠ್ಠಲನೇ ಅವರ ಮುಂದಿಟ್ಟನು. ಅದಕ್ಕೆ ನಾಮದೇವರು, ’ಅವು ಪೂರ್ತಿಯಾಗದಿದ್ದರೆ | ನಾಲಿಗೆಯನ್ನು ಕೊಯ್ದಿರಿಸುವೆನು’, ಎಂದು ಖಡಾಖಂಡಿತವಾಗಿ ಹೇಳಿದರು. ಆಗ ನಾಮದೇವರ ಭಕ್ತಿಯ ಋಣವನ್ನು ಮನ್ನಿಸಿ ಸರಸ್ವತಿಗೇನೆ ಅವರ ನಾಲಿಗೆಯ ಮೇಲೆ ವಾಸಿಸಲು ಹೇಳಲಾಯಿತು. ಅವಳ ಕೃಪೆಯಾದ ಬಳಿಕ ಅವರ ಪ್ರತಿಜ್ಞೆಯು ಪೂರ್ತಿಯಾಗಲು ಹೆಚ್ಚು ತೊಂದರೆಯಾಗದೆಂಬ ಭರವಸೆ. ಈ ವಿಶ್ವಾಸದಿಂದಾಗಿ ಗೋಣಾಯಿ, ರಾಜಾಯಿಯೆಂಬ ಅತ್ತೆ-ಸೊಸೆ, ದಾಮಾ-ನಾಮಾರೆಂಬ ತಂದೆ-ಮಗ, ನಾರಾ, ಮ್ಹಾರಾ, ಗೋಂದಾ, ವಿಠಾರೆಂಬ ನಾಲ್ವರು ಗಂಡುಮಕ್ಕಳು, ಲಾಡಾಯಿ, ಗೋಡಾಯಿ, ಯೇಸಾಯಿ, ಸಾಕರಾಯಿರೆಂಬ ನಾಲ್ವರು ಸೊಸೆಯಂದಿರು, ಮಗಳು ನಿಂಬಾಯಿ, ಸೋದರಿ ನಾವೂಬಾಯಿ, ತಲೆಕೆಟ್ಟ ದಾಸಿಯಾದ ಜನಿ, ’ಇಷ್ಟೆಲ್ಲ ಜನರು ಅಭಂಗವನ್ನು ಆರಂಭಿಸಿದರು | ದೇವನೇ, ಪೂರ್ತಿಗೊಳಿಸಿದರೆಂದು ನಾಮದೇವನೆನ್ನುವನು’. ಅಂದರೆ ಇಷ್ಟೆಲ್ಲ ಜನರು ಸೇರಿ ಅಭಂಗದ ಪ್ರತಿಜ್ಞೆಯನ್ನು ಪೂರ್ತಿ ಮಾಡಿದರು.

[೨]
ನೆಲೆಯನಿತ್ತರೆ ಇರುವೆನು ಜೊತೆಗೆ | ಸಂತರ ಸಾಲಿನಲಿ ಕಾಲಬಳಿಗೆ ||೧||
ಮೆಚ್ಚಿದ ನೆಲೆಯನು ತ್ಯಜಿಸಿ ಬಂದಿಹೆನು | ಉದಾಸೀನ ಮಾಡಬಾರದು ಇನ್ನು ||ಪ||
ಕೊನೆಯ ಸ್ಥಳವು ನೀಚ ನನ್ನ ವೃತ್ತಿ | ಆಧಾರದಿಂದ ವಿಶ್ರಾಂತಿಯನು ಪಡೆಯುವೆನು ||೨||
ಮೆಚ್ಚಿದ ನೆಲೆಯನು ತ್ಯಜಿಸಿ ಬಂದಿಹೆನು | ಉದಾಸೀನ ಮಾಡಬಾರದು ಇನ್ನು ||ಪ||
ನಾಮದೇವರು ತುಕ್ಯಾನ ಕನಸಿನಲ್ಲಿ ಕಂಡರು | ಈ ಪ್ರಸಾದ ಹೊಟ್ಟೆಯಲಿ ಉಳಿಯಿತು ||೩||
ಮೆಚ್ಚಿದ ನೆಲೆಯನು ತ್ಯಜಿಸಿ ಬಂದಿಹೆನು | ಉದಾಸೀನ ಮಾಡಬಾರದು ಇನ್ನು ||ಪ||

      ಅರ್ಥ :-೧. ಮೇಲಿನ ಅಭಂಗದಲ್ಲಿ ಹೇಳಿದಂತೆ ತುಕಾರಾಮರಿಗೆ ನಾಮದೇವರು ಹಾಗೂ ವಿಠ್ಠಲನ ಪ್ರೇರಣೆಯು ದೊರೆತ ಬಳಿಕ ತುಕಾರಾಮರು, ’ನೀವು ನನಗೆ ಆಶ್ರಯವನ್ನು ಇತ್ತರೆ ನಾನು ನಿಮ್ಮ ಜೊತೆಗೆ ಇರುವೆನು. ನಾನು ಸಂತರ ಸಾಲಿನಲ್ಲಿ ಅವರ ಪಾದಗಳ ಬಳಿ ಕುಳಿತುಕೊಳ್ಳುವೆನು. ೨. ನಿಮ್ಮ ಬಗೆಗಿನ ಪ್ರೀತಿಯಿಂದಾಗಿಯೇ ನಾನು ನನ್ನ ನೆಲೆಯನ್ನು ತೊರೆದು ಬಂದಿರುವೆನು. ಇನ್ನು ನೀವು ಉದಾಸೀನ ಮಾಡಬೇಡಿ. ೩. ನನ್ನದು ತೀರ ಕೊನೆಯ ಸ್ಥಾನವಾಗಿದ್ದು ನನ್ನ ವೃತ್ತಿಯೂ ತೀರ ಕೆಳಮಟ್ಟದ್ದು. ಆದರೆ ಇನ್ನು ನನಗೆ ನಿಮ್ಮ ಪಾದಗಳಲ್ಲಿ ವಿಶ್ರಾಂತಿಯು ಲಭಿಸಲಿದೆ. ೪. ನನಗೆ ಕನಸಿನಲ್ಲಿ ನಾಮದೇವರ ಭೇಟಿಯಾದುದರಿಂದ ನನ್ನ ಹೃದಯದಲ್ಲಿ ಈ ಕವಿತ್ವದ ಪ್ರಸಾದವು ತುಂಬಿಕೊಂಡಿದೆ’, ಎನ್ನುತ್ತಾರೆ.

[೩]
ಕವಿಯೆಂದು ನಾಚಿಕೆಯಿಲ್ಲವೆ ಈಗೇನು ಮಾಡಲಿ | ಭಕ್ತರಾಜರು ನನಗೆ ನಕ್ಕಾರು ||೧||
ಆಯ್ಕೆಯ ದಿನವೀಗ ಬಂದಿದೆ | ಸತ್ಯವಿಲ್ಲದ ರಸವು ವಿರಸವಾದೀತು ||ಪ||
ಅನುಭವವಿಲ್ಲದೆ ಪಾಪ ಮಾಡುವರ್ಯಾರು | ವ್ಯರ್ಥದ ಸಂಕಲ್ಪವು ನಾಚಿಕೆಗೇಡು ||೨||
ಆಯ್ಕೆಯ ದಿನವೀಗ ಬಂದಿದೆ | ಸತ್ಯವಿಲ್ಲದ ರಸವು ವಿರಸವಾದೀತು ||ಪ||
ತಡೆದುಕೊಳ್ಳಲಾರೆನಿನ್ನು ನನ್ನ ಜೀವ | ತನ್ನಲ್ಲಿ ಸ್ಥಿರವಿಲ್ಲ, ಎನ್ನುವನು ತುಕಾ ||೩||
ಆಯ್ಕೆಯ ದಿನವೀಗ ಬಂದಿದೆ | ಸತ್ಯವಿಲ್ಲದ ರಸವು ವಿರಸವಾದೀತು ||ಪ||

      ಅರ್ಥ :- ೧. ಕವಿತ್ವವನ್ನು ಮಾಡುವುದೆಂದರೆ ನನಗೀಗ ನಾಚಿಕೆ ಎನ್ನಿಸುವುದಿಲ್ಲವೆ? ಭಕ್ತರಾಜರು ನನ್ನನ್ನು ಕಂಡು ನಕ್ಕಾರು. ೨. ಈಗ ತೀರ್ಮಾನಿಸುವ ದಿನವು ಬಂದಿದೆ. ನಿಜವಿಲ್ಲದ ರಸವು ವಿರಸವಾಗುವುದು. ೩. ಅನುಭವವಿಲ್ಲದೆ ಯಾರು ಪಾಪವನ್ನಾದರೂ ಎಸಗುವರು? ವ್ಯರ್ಥ ಸಂಕಲ್ಪವನ್ನು ಮಾಡುವುದು ನಾಚಿಕೆಗೇಡು. ೪. ನಾನಿನ್ನು ತಡೆದುಕೊಳ್ಳಲಾರೆನು. ಏಕೆಂದರೆ ಈಗ ನನ್ನ ಜೀವವೇ ತನ್ನಲ್ಲಿ ಸ್ಥಿರವಾಗಿ ಉಳಿದಿಲ್ಲ, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.

[೪]
ನಿನಗೆ ಸಂತೋಷವಾಗಲೆಂದು | ನಾನು ಹೆಣಗುತ್ತಿರುವೆನು ||೧||
ನಿನಗಿಷ್ಟವಾಗುವ ಮಾತುಗಳನು | ಕ್ಷಣ ಕ್ಷಣಕೂ ಆಡುತ್ತಿರುವೆನು ||ಪ||
ನೀನೆನಗೆ ಅಭಯವನೀಯು | ನನ್ನ ಮಾತು ನೆಲಕ್ಕುರುಳದಿರಲಿ ||೨||
ನಿನಗಿಷ್ಟವಾಗುವ ಮಾತುಗಳನು | ಕ್ಷಣ ಕ್ಷಣಕೂ ಆಡುತ್ತಿರುವೆನು ||ಪ||
ಪರಸ್ಪರರಲಿ ಸಂಭಾಷಣೆಯು | ಹೆಚ್ಚಬೇಕೆನ್ನುವನು ತುಕಾ ||೩||
ನಿನಗಿಷ್ಟವಾಗುವ ಮಾತುಗಳನು | ಕ್ಷಣ ಕ್ಷಣಕೂ ಆಡುತ್ತಿರುವೆನು ||ಪ||

      ಅರ್ಥ :- ೧. ದೇವನೆ, ನೀನು ಸಂತುಷ್ಟನಾಗಬೇಕೆಂದು ಒಂದೇಸವನೆ ಯತ್ನಿಸುತ್ತಿರುವೆನು. ೨. ದೇವನೆ, ನಿನಗೆ ಇಷ್ಟವಾಗುವ ಮಾತುಗಳನ್ನು ಕ್ಷಣ ಕ್ಷಣಕ್ಕೆ ಆಡುತ್ತಿರುವೆನು. ೩. ನೀನು ನನಗೆ ಅಭಯದಾನವನ್ನು ನೀಡಬೇಕು. ನನ್ನ ಮಾತು ನೆಲದಮೇಲೆ ಬಿದ್ದಂತೆ ವ್ಯರ್ಥವಾಗಬಾರದು. ೪. ಪರಸ್ಪರರ ನಡುವೆ ಪ್ರೀತಿಯ ಸಂಭಾಷಣೆಯನ್ನು ಹೆಚ್ಚಿಸಬೇಕು, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.

[೫]
ತುದಿಮೊದಲಾಗಿ ಯಾವ ಆಸೆಯುಳಿದಿಲ್ಲ | ತುಂಬ ಕಠಿಣನೆಂದು ಕಾಣುತ್ತಿ ||೧||
ನನ್ನ ಶಕ್ತಿಯನೆಲ್ಲ ವ್ಯಯಿಸಿದೆನು | ನನ್ನಾವ ಯುಕ್ತಿಯೂ ನಡೆಯುತ್ತಿಲ್ಲ ||ಪ||
ಆಡಿದ ಮಾತು ಮುಗಿಲಲ್ಲಿ ಕಳೆಯಿತು | ನಿಂತ ಹಾಗೆಯೇ ನಿಂತಿದ್ದೇನೆ ||೨||
ನನ್ನ ಶಕ್ತಿಯನೆಲ್ಲ ವ್ಯಯಿಸಿದೆನು | ನನ್ನಾವ ಯುಕ್ತಿಯೂ ನಡೆಯುತ್ತಿಲ್ಲ ||ಪ||
ಏನೂ ಮಾಡಬೇಕೆನ್ನಿಸುತ್ತಿಲ್ಲ | ಸುಮ್ಮನೆ ಚಿತ್ತ ದಣಿದಿದೆ, ಎನ್ನುವನು ತುಕಾ ||೩||
ನನ್ನ ಶಕ್ತಿಯನೆಲ್ಲ ವ್ಯಯಿಸಿದೆನು | ನನ್ನಾವ ಯುಕ್ತಿಯೂ ನಡೆಯುತ್ತಿಲ್ಲ ||ಪ||

      ಅರ್ಥ :- ೧. ದೇವನೆ, ಶುರುವಿನಿಂದ ಕೊನೆಯವರೆಗೆ ಮನಸ್ಸಿಗೆ ಯಾವುದೇ ಆಸೆಯು ಕಾಣುತ್ತಿಲ್ಲ. ನೀನು ಕಠಿಣನೂ, ಅಪ್ರಾಪ್ಯನೂ ಆಗಿ ಕಾಣುವಿ. ೨. ನನ್ನೆಲ್ಲ ಸಾಮರ್ಥ್ಯವು ಹಾಳಾಯಿತು. ನೀನದನ್ನು ನಾಶಪಡಿಸಿದೆ. ಇನ್ನು ನಿನ್ನೆದುರು ನನ್ನಾವ ಯುಕ್ತಿಯೂ ನಡೆಯುವಂತೆ ಕಾಣುತ್ತಿಲ್ಲ. ೩. ನಾನು ಮಾತನಾಡಿದುದೆಲ್ಲ ಮುಗಿಲಲ್ಲಿ ಇಲ್ಲವಾಗುತ್ತಿದೆ. ನಾನು ಮಾತ್ರ ಇದ್ದ ಹಾಗೆಯೇ ನಿನ್ನೆದುರು ನಿಂತಿದ್ದೇನೆ. ೪. ಇನ್ನು ಮತ್ತೇನನ್ನೂ ಮಾಡಬೇಕೆಂದು ಅನ್ನಿಸುತ್ತಿಲ್ಲ. ಚಿತ್ತವು ಸುಮ್ಮನೆ ದಣಿದುಕೊಂಡಿದೆ, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.

[೬]

ಕವಿತ್ವವನು ಮಾಡುವೆನೆಂದು ಯಾರಾದರೂ ಅನ್ನುತ್ತಿದ್ದರೆ | ಆ ವಾಣಿಯು ನನ್ನದಲ್ಲ ||೧|| ಅದು ನನ್ನ ಯುಕ್ತಿಯ ಮಾತಲ್ಲ | ವಿಶ್ವೇಶ್ವರನು ನನ್ನಿಂದ ಹೇಳಿಸಿದುದು ||೨||
ನಾನು ಪಾಮರ ಅರ್ಥಭೇದವನೇನು ಬಲ್ಲೆ | ಗೋವಿಂದ ನುಡಿಸುವುದನ್ನೇ ನುಡಿವೆ ||೩||
ನಾನು ಅಳೆಯಲು ಕುಳಿತವನು ಮಾತ್ರ | ನಾನೇನೂ ಅಲ್ಲ, ಅವನದೇ ಸ್ವಾಮಿಸತ್ತೆ ||೪||
ನಾನು ದೇವಸೇವಕನು ನಿಜ | ಅವನ ನಾಮಮುದ್ರೆಯನು ಧರಿಸಿರುವೆನೆನ್ನುವನು ತುಕಾ ||೫||

ಅರ್ಥ:- ೧. ನಾನು ಕವಿತೆಯನ್ನು ರಚಿಸುತ್ತೇನೆಂದು ಯಾರಾದರೂ ಅನ್ನುತ್ತಿದ್ದರೆ, ಕವಿತ್ವದ ವಾಣಿಯು ನನ್ನದಲ್ಲವೆಂಬುದು ವಸ್ತುಸ್ಥಿತಿಯಾಗಿದೆ. ೨. ಕವಿತ್ವವು ನನ್ನ ಯುಕ್ತಿಯಾಗಿರದೆ ಆ ವಿಶ್ವಂಭರನು ನನ್ನಿಂದ ಮಾತನಾಡಿಸುತ್ತಾನೆ. ೩. ಪಾಮರನಾದ ನಾನು ಶಬ್ದಗಳ ಅರ್ಥಭೇದವನ್ನೇನು ಬಲ್ಲೆನು? ಆ ಗೋವಿಂದನು ನನ್ನಿಂದ ಆಡಿಸುವುದನ್ನು ನಾನು ಆಡುತ್ತೇನಷ್ಟೆ. ೪. ನಾನು ಅಳೆಯಲೆಂದು ಕುಳಿತವನು. ಈ ಕೆಲಸದಲ್ಲಿ ನಾನು ಯಾರೂ ಅಲ್ಲ. ಎಲ್ಲ ಸತ್ತೆಯೂ ಆ ಸ್ವಾಮಿಯದೇ. ೫. ನಾನು ದೇವರ ಸೇವಕನು ನಿಜ. ಅವನ ಹೆಸರಿನ ಚಿಹ್ನೆಗಳನ್ನು ನನ್ನ ಮೈಮೇಲೆ ಧರಿಸಿದ್ದೇನಷ್ಟೆ, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.

      ವಿವರಣೆ :- ತುಕೋಬರಿಗೆ ಕವಿತೆಯ ಸ್ಫೂರ್ತಿಯು ಯಾವಾಗ, ಎಲ್ಲಿ ಆಯಿತೆಂಬುದನ್ನು ಕುರಿತು ಮುಂದೆ ವಿವರಣೆಯು ಬರಲಿದೆ. (ನಾಮದೇವರು ಕನಸಿನಲಿ ಬಂದು ನನ್ನನೆಚ್ಚರಿಸಿದರು. ಅಭಂಗ-೧೩೨೦) ಮತ್ತು (ಸತ್ಯ ಅಸತ್ಯಗಳನು ಮನಗಾಣಿಸಿದರು. ಅಭಂಗ ೧೩೩೩). ಇಲ್ಲಿ ಒಂದೆರಡು ಸಂಗತಿಗಳನ್ನು ಕುರಿತು ವಿವರಿಸಬೇಕಾಗಿದೆ. ಮೊದಲನೆಯದಾಗಿ, ತಾವು ಕವಿತೆಯನ್ನು ಮಾಡುತ್ತೇವೆ, ಎಂಬ ಬಗೆಗೆ ತುಕಾರಾಮರ ನಿಲುವು ಬಲು ನಮ್ರವಾದುದು, ಅದರಂತೆಯೇ ಖಚಿತವಾದುದೂ ಕೂಡ. ತುಕೋಬನಂಥ ಭಕ್ತನು ವೇದವಾಣಿಯನ್ನು ಮರಾಠಿ ಭಾಷೆಯಲ್ಲಿ ಅಲ್ಲದೆ ಕವಿತ್ವದ ಮೂಲಕ ಹೇಳಲು ಸಾಹಸವನ್ನು ಮಾಡುವುದೆಂದರೆ ಅದೊಂದು ಅಲೌಕಿಕವಾದ ಸಂಗತಿಯೇ ಸರಿ. ಆದರೆ ಮೊದಮೊದಲು ಈ ದಿವ್ಯವಾಣಿಗೂ ವಿರೋಧವು ವ್ಯಕ್ತವಾಯಿತು. ತುಕೋಬರು ಹುಟ್ಟಿನಿಂದ ಮೇಲಿನ ವರ್ಣದವರೇನೂ ಆಗಿರಲಿಲ್ಲ. ವೇದದಲ್ಲಿರುವ ಪರಮಾರ್ಥಜ್ಞಾನವು ಸಂಸ್ಕೃತದ ಬದಲು ದೇಸಿಯ ಭಾಷೆಯಲ್ಲಿ ಬರುವುದು ಕೆಲವರಿಗೆ ಬೇಕಿರಲಿ. ಹೀಗಾಗಿ ತುಕೋಬರು ಇವರೆಲ್ಲರಿಗೆ ಉತ್ತರವನ್ನು ನೀಡಲೆಂದಾಗಲಿ ಇಲ್ಲವೆ ವಸ್ತುಸ್ಥಿತಿಯನ್ನು ನಿವೇದಿಸಲೆಂದಾಗಲಿ, ತಮ್ಮ ಕವಿತ್ವದ ವೈಶಿಷ್ಟಗಳನ್ನು ಕುರಿತು ನಡುನಡುವೆ ಹೇಳುವಂತೆ ಕಾಣುತ್ತದೆ.

      ಅವರ ಕವಿತ್ವದ ವೈಶಿಷ್ಟ್ಯವು ಈ ಅಭಂಗದಲ್ಲಿ ಬಂದಿದೆ. ಕವಿತ್ವದ ವಾಣಿಯು ತಮ್ಮದಾಗಿರದೆ ವಿಶ್ವಂಭರನಾಗಿದೆ, ಈಶ್ವರನು ತಮ್ಮಿಂದ ನುಡಿಸಿದುದಾಗಿದೆ, ಎಂದಿದ್ದಾರೆ. ತಾವು ನಿಮಿತ್ತ ಮಾತ್ರರು. ಒಡೆಯನ ಸರಕನ್ನು ಅಳೆಯುವವರು ಮಾತ್ರ. ತಾವು ಸುಮ್ಮನೆ ಇರುವವರು, ಅವನ ಸತ್ತೆಯೇ ನಿಜವಾದುದು. ಇಂಥ ಅವರ ಭಾವನೆಯು ಅಲಲ್ಲಿ ವ್ಯಕ್ತಗೊಳ್ಳುತ್ತದೆ. ’ಕೂಲಿಯಾಳಿನ ಕೈಲಿ ಅಳತೆಯ ಪಾತ್ರೆ | ನಾನಿಲ್ಲಿ ಸುಮ್ಮನೆ, ಅವನ ಸತ್ತೆ ನಿಜ’, ’ನನ್ನ ಮಾತಿಗೆ ಅದಾವ ಅರ್ಥವೂ ಇರಲಿಲ್ಲ | ನನ್ನ ಮಾತಲ್ಲ, ವಿಠ್ಠಲನದು’, ’ನನ್ನಿಂದ ಮಾತನಾಡಿಸುವನು | ಭೂಮಿಯನು ಧರಿಸುವವನು’, ’ನನ್ನ ಬಲದಿಂದ ಮಾತನಾಡುತ್ತಿಲ್ಲ | ಕೃಪಾವಂತನಾದ ಆ ಸಖನ ವಾಣಿಯದು’, ’ಕಲಿಸುವ ಒಡೆಯನೇ ಬೇರೆ’, ’ಆ ವಿಶ್ವಂಭರನೇ ಮಾತನಾಡಹಚ್ಚುತ್ತಾನೆ’, ’ದೇವನು ನನ್ನಿಂದ ಮಾತಾಡಿಸುವನೆನ್ನುವನು ತುಕಾ’, ’ಸಾಕ್ಷಾತ್ಕಾರದ ವಾಣಿಯನು ನುಡಿಯುವೆನು | ನಾರಯಣನಲ್ಲಿ ಬೆರೆಯಿಸಿ’, ಎನ್ನುವ ಹಲವಾರು ವಚನಗಳ ಮೂಲಕ ತುಕೋಬರು ಈ ವಾಣಿಯು ತಮ್ಮದಾಗಿರದೆ ಅದು ವಿಠ್ಠಲನದು, ವಿಶ್ವಂಭರನದು ಎಂದು ಮತ್ತೆ ಮತ್ತೆ ಹೇಳಿದ್ದಾರೆ. ಹೀಗಾಗಿ ತುಕೋಬರ ವಾಣಿ ಹಾಗೂ ಕವಿತ್ವದ ತೇಜಸ್ಸು ದಿವ್ಯವಾದುದು, ಅಲೌಕಿಕವಾದುದು ಹಾಗೂ ಆತ್ಮೀಯತೆಯದು. ಕವಿತ್ವದ ಶಬ್ದಗಳೆಂದರೆ ಟಂಕಸಾಲೆಯ ನಾಣ್ಯಗಳಲ್ಲ, ಎಂದು ಅವರು ಒಂದು ಅಭಂಗದಲ್ಲಿ ಹೇಳಿದ್ದಾರೆ. ದೇವರು ತಮಗೆ ಪ್ರೇರಣೆಯನ್ನು ಇತ್ತುದರಿಂದಲೇ ತಮ್ಮ ವಾಣಿಯು ಇಷ್ಟೊಂದು ದಿವ್ಯವೂ, ರಸವತ್ತಾದುದೂ ಆಯಿತೆಂದು ಅವರು ಅಭಿಪ್ರಾಯಪಡುತ್ತಾರೆ. ಇದೇ ಅಭಂಗದಲ್ಲಿ ಇಂಥ ತೀವ್ರತೆಯನ್ನು ವರ್ಣಿಸುವಾಗ ಅವರು. ’ದೇವನು ಬಲವಂತವನು ಮಾಡಿದನು’, ಎನ್ನುತ್ತಾರೆ.

      ಸಾರಾಂಶವೆಂದರೆ, ತಾವು ಪಾಮರರು, ತಮಗೆ ಸಾದಾ ಶಬ್ದಗಳ ಅರ್ಥ ಕೂಡ ತಿಳಿಯದು, ಆದರೆ, ಗೋವಿಂದನೇ ಮಾತನಾಡಿಸುವವನಾದ ಕಾರಣ ತಮ್ಮಿಂದ ಈ ಕವಿತೆಯೆಂಬುದು ತಯಾರಾಗುತ್ತಿದೆ. ನಿಜ ಹೇಳಬೇಕೆಂದರೆ ತಾವು ಈಶ್ವರನ ನಿಷ್ಠಾವಂತ ಸೇವಕ ಮಾತ್ರ. ಅವನ ನಾಮಮುದ್ರೆಯು ತಮ್ಮ ಕಾವ್ಯಕ್ಕಿರುವ ಕಾರಣಾದು ಪ್ರಾಸಾದಿಕವೂ, ಪ್ರಸಾದಪೂರ್ಣವೂ ಆಗಿದೆ. ಈ ಅಭಂಗದ ’ನಾಮದ ಮುದ್ರೆ’ ಎಂಬ ಪದದ ಶ್ಲೇಷೆಯನ್ನೂ ಗಮನಿಸಬೇಕು. ತುಕಾರಾಮರಿಗೆ ನಾಮದೇವರ ಪರಂಪರೆಯಿಂದ ಕವಿತ್ವದ ಕೊಡುಗೆಯು ಲಭಿಸಿದೆ. ನಾಮದೇವರು ತಮಗೆ ಸ್ಫೂರ್ತಿಯನ್ನಿತರೆಂದು ಅವರೇ ಸಾಕ್ಷ್ಯ ನುಡಿದಿದ್ದಾರೆ. ಹೀಗಾಗಿ ’ನಾಮದ ಮುದ್ರೆ’ಯನ್ನು ’ನಾಮದೇವರಿತ್ತ ಮುದ್ರೆ’, ಅಂದರೆ ನಾಮದೇವರು ಮನ್ನಣೆಯನ್ನಿತ್ತರೆಂದು ಕೂಡ ಅರ್ಥೈಸಬಹುದಾಗಿದೆ.

[೭]
ಕೌಶಲದಿಂದ ಶಬ್ದಗಳನು ಜೋಡಿಸಿದರೂ | ಕವಿತ್ವದ ಮನ್ನಣೆ ದೊರೆಯದು ||೧||
ಸತ್ಯದ ಅನುಭವವು ನಿಜದಲ್ಲಿ ಗಮನಾರ್ಹ | ಅನುಭವದಿಂದ ಗುಣವು ಸವಿ ಪಡೆವುದು ||ಪ||
ಬೆಂಕಿಯಲಿ ಹುಸಿ ಒಡವೆ ತಡೆಯದು | ಒರೆಗೆ ಹಚ್ಚಲು ಕೀಳುಧಾತು ಹೊರಬರುವುದು ||೨||
ಸತ್ಯದ ಅನುಭವವು ನಿಜದಲ್ಲಿ ಗಮನಾರ್ಹ | ಅನುಭವದಿಂದ ಗುಣವು ಸವಿ ಪಡೆವುದು ||ಪ||
ಇಲ್ಲಿ ಮಾತನ್ನು ಬೆಳೆಸಿ, ಬಿಡಿಸಿ ಹೇಳಲೇಬೇಕಿಲ್ಲ | ಎನ್ನುವನು ತುಕಾ ||೩||
ಸತ್ಯದ ಅನುಭವವು ನಿಜದಲ್ಲಿ ಗಮನಾರ್ಹ | ಅನುಭವದಿಂದ ಗುಣವು ಸವಿ ಪಡೆವುದು ||ಪ||

      ಅರ್ಥ:-೧. ಬಲು ಕೌಶಲದಿಂದ ಶಬ್ದಗಳನ್ನು ಜೋಡಿಸಿಯಾರಾದರೂ ಕವಿತ್ವವನ್ನು ಮಾಡಿದರೆ ಅದಕ್ಕೆ ಯಾವ ಮನ್ನಣೆಯೂ ಸಿಕ್ಕಲಾರದು. ೨. ಸತ್ಯತ್ವದ ಅನುಭವವನ್ನು ಪಡೆದವನು ಸತ್ಯತ್ವದಿಂದಲೇ ಇನ್ನೊಬ್ಬರ ಅಂತಃಕರಣವನ್ನು ತಟ್ಟುವನು. ಅವನ ವಾಣಿಗೆ ಅನುಭವದಿಂದಾಗಿಯೇ ಗುಣಗಳ ಸವಿಯು ಒದಗುವುದು. ೩. ಕೀಳು ಲೋಹದ ಒಡವೆಗೆ ಬಂಗಾರದ ಗಿಲೀಟು ಮಾಡಿಸಿ ಪ್ರಯೋಜನವೇನು? ಬೆಂಕಿಯೆದುರು ಅದರ ಆಟ ನಡೆಯದು. ಅದನ್ನು ಒರೆಗೆ ಹಚ್ಚಿದರೆ ಒಳಗಿನ ಕೀಳುಲೋಹವು ತೆರೆದುಕೊಳ್ಳುವುದು. ೪. ಸತ್ಯತ್ವದ ಅನುಭವವನ್ನು ಪಡೆದವನು ಅದನ್ನು ಶಬ್ದಗಳ ಮೂಲಕ ವಿವರಿಸಿ ಹೇಳಬೇಕಿಲ್ಲ, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.

[೮]
ಅಪ್ಪ ಮಡಿದನು ತಿಳಿಯಲಿಲ್ಲ | ಸಂಸಾರದ ಚಿಂತೆಯಿರಲಿಲ್ಲ ||೧||
ವಿಠ್ಠಲನೆ, ನಿನ್ನ ನನ್ನ ರಾಜ್ಯ | ಬೇರೆಯವರಿಗೆ ಕೆಲಸವಿಲ್ಲ ||ಪ||
ಮಡದಿ ಮಡಿದಳು ಒಳ್ಳೆಯದಾಯಿತು | ದೇವನೆ ಮಾಯೆಯನು ಬಿಡಿಸಿದೆ ||೨||
ವಿಠ್ಠಲನೆ, ನಿನ್ನ ನನ್ನ ರಾಜ್ಯ | ಬೇರೆಯವರಿಗೆ ಕೆಲಸವಿಲ್ಲ ||ಪ||
ಮಗನು ಮಡಿದನು ಒಳ್ಳೆಯದಾಯಿತು | ದೇವನು ಮಾಯಾರಹಿತನನ್ನಾಗಿ ಮಾಡಿದನು ||೩||
ವಿಠ್ಠಲನೆ, ನಿನ್ನ ನನ್ನ ರಾಜ್ಯ | ಬೇರೆಯವರಿಗೆ ಕೆಲಸವಿಲ್ಲ ||ಪ||
ಕಣ್ಣೆದುರು ನನ್ನಮ್ಮ ಮಡಿದಳು | ಚಿಂತೆ ದೂರಾಯಿತೆನ್ನುವನು ತುಕಾ ||೪||
ವಿಠ್ಠಲನೆ, ನಿನ್ನ ನನ್ನ ರಾಜ್ಯ | ಬೇರೆಯವರಿಗೆ ಕೆಲಸವಿಲ್ಲ ||ಪ||

      ಅರ್ಥ :- ೧. ಅಪ್ಪ ಮಡಿದನು ತಿಳಿಯಲಿಲ್ಲ. ಸಂಸಾರದ ಚಿಂತೆಯಿರಲಿಲ್ಲ. ೨. ವಿಠ್ಠಲನೆ, ಇನ್ನು ನಿನ್ನ, ನನ್ನ ರಾಜ್ಯವಿದ್ದು ಅದರಲ್ಲಿ ಬೇರೆಯವರಿಗೆ ಕೆಲಸವಿಲ್ಲ. ೩. ದೇವನೆ, ಮಡದಿ ಮಡಿದಳು. ಒಳ್ಳೆಯದಾಯಿತು. ೪. ಮಗನು ಮಡಿದನು. ಒಳ್ಳೆಯದಾಯಿತು. ದೇವನು ನನ್ನನ್ನು ಈ ಪಾಶದಿಂದಲೂ ಬಿಡುಗಡೆಗೊಳಿಸಿದನು. ೫. ನನ್ನ ಕಣ್ಣ್ನೆದುರೇ ನನ್ನಮ್ಮ ಮಡಿದಳು. ಚಿಂತೆ ದೂರಾಯಿತು, ಎಂದು ತುಕಾರಾಮ ಮಹಾರಾಜರು ಅನ್ನುತ್ತಾರೆ.

[೯]

      ಸಂತರು, ’ನಿಮಗೆ ವೈರಾಗ್ಯ ಹೇಗೆ ಬಂದಿತು?’, ಎಂದು ಸ್ವಾಮಿಗಳನ್ನು ಕೇಳಿದಾಗ ಅವರು ಹೇಳಿದ ಉತ್ತರದ ಅಭಂಗ


ಶೂದ್ರ ಕುಲದಲಿ ಜನ್ಮ, ವೃತ್ತಿಯಲಿದ್ದೆನು | ಇವನು ಮೊದಲಿನಿಂದ ಕುಲದೇವನು ||೧||
ಹೇಳಬಾರದಾದರೂ ಮಾತನು ಪಾಲಿಸಿದೆನು | ನೀವು ಸಂತರು ಪ್ರಶ್ನೆ ಕೇಳಿದಿರೆಂದು ||೨||
ಸಂಸಾರದ ದುಃಖದಿಂದ ತುಂಬ ನೊಂದೆನು | ತಾಯಿ ತಂದೆಯರೂ ಮಡಿದರು ||೩||
ಬರದಿ ಸಿರಿ ಕರಗಿ ಮಾನ ಹೋಯಿತು | ಒಬ್ಬ ಮಡದಿ ಅನ್ನವಿಲ್ಲದೆ ಮಡಿದಳು ||೪||
ನಾಚಿಕೆಯಾಗಿ ದುಃಖದಿಂದ ಜೀವಕೆ ಬೇಸತ್ತೆ | ವ್ಯಾಪಾರದಿ ನಷ್ಟ ಬಂದಿತು ||೫||
ದೇವಾಲಯವು ಪಾಳು ಬಿದ್ದಿತ್ತು | ಅದನ್ನು ಕಟ್ಟಿಸುವ ಯೋಚನೆ ಬಂದಿತು ||೬||
ಏಕಾದಶಿಯಂದು ಕೀರ್ತನೆ ಮಾಡಹತ್ತಿದೆ | ಮೊದಲು ಅಭ್ಯಾಸದತ್ತ ಗಮನವಿರಲಿಲ್ಲ ||೭||
ಕೆಲ ಸಂತರ ಉತ್ತರಗಳನು ಉರುಹೊಡೆದೆ | ಮನದಿ ಗೌರವ, ನಂಬಿಕೆಯನಿರಿಸಿದೆ ||೮||
ಹಾಡುವವರ ಹಿಂದೆ ನಿಂತು ಪಲ್ಲವಿ ಹಾಡುತಿದ್ದೆನು | ಭಾವ, ಚಿತ್ತವ ಶುದ್ಧಗೊಳಿಸಿ ||೯||
ಸಂತರ ಪಾದತೀರ್ಥವನು ಸೇವಿಸಿದೆನು | ಮನದಲಿ ನಾಚಿಕೆಯನು ಬರಗೊಡಲಿಲ್ಲ ||೧೦||
ಆದಷ್ಟು ಪರೋಪಕಾರವನು ಮಾಡಿದೆನು | ಅದಕಾಗಿ ದೇಹವನು ದುಡಿಸಿದೆನು ||೧೧||
ನಮ್ಮವರ ಮಾತುಗಳನು ಆಲಿಸಲಿಲ್ಲ ನಾನು | ಇಡಿಯ ಪ್ರಪಂಚಕ್ಕೆ ಬೇಸತ್ತೆನು ||೧೨||
ಸತ್ಯಾಸತ್ಯಗಳಿಗೆ ಮನವನೇ ಸಾಕ್ಷಿಯಾಗಿರಿಸಿದೆನು | ಬಹುಮತವ ಒಪ್ಪಲಿಲ್ಲ ನಾನು ||೧೩||
ಕನಸಿನಲಿ ಗುರೂಪದೇಶವ ಒಪ್ಪಿಕೊಂಡೆನು | ನಾಮದಿ ದೃಢ ನಂಬಿಕೆಯನಿರಿಸಿದೆನು ||೧೪||
ಮುಂದೆ ಕವಿತೆಯ ಸ್ಫೂರ್ತಿ ಮೂಡಿತು | ಚಿತ್ತದಿ ವಿಠೋಬನ ಪಾದವ ಹಿಡಿದೆನು ||೧೫||
ನಿಷೇಧಗಳ ಆಘಾತ ನನ್ನ ಮೇಲಾಯಿತು | ಅದರಿಂದ ನನ್ನ ಮನ ನೊಂದಿತು ||೧೬||
ವಹಿ ಮುಳುಗಿದಾಗ ಧರಣಿ ಕುಳಿತೆನು | ನಾರಾಯಣನು ಸಮಾಧಾನಗೊಳಿಸಿದನು ||೧೭||
ಹಲವು ಸಂಗತಿಗಳಿವೆ. ವಿಸ್ತಾರದಿಂದ ಹೇಳಿದರೆ | ತಡವಾಗುವುದು, ಸಾಕಿನ್ನು ||೧೮||
ಈಗಿದ್ದುದು ಇದ್ದ ಹಾಗೆಯೇ ಕಾಣುತ್ತಿದೆ | ಮುಂದಿನ ಅವಸ್ಥೆಯನು ದೇವನೇ ಬಲ್ಲ ||೧೯||
ನಾರಾಯಣನು ಭಕ್ತನನು ಕಡೆಗಣಿಸನು | ಅವನು ಇಂಥ ಕೃಪಾಳು ಎಂದರಿತೆನು ||೨೦||
ಪಾಂಡುರಂಗನೇ ನನ್ನೆಲ್ಲ ಬಂಡವಾಳ | ಅವನೇ ನನ್ನಿಂದ ಹೇಳಿಸಿದನೆನ್ನುವನು ತುಕಾ ||೨೧||

      ಅರ್ಥ :- ೧. ನಾನು ಶೂದ್ರ ಜಾತಿಯವನಿದ್ದು ವ್ಯಾಪಾರವು ನನ್ನ ವೃತ್ತಿಯಾಗಿತ್ತು. ನನ್ನ ಕುಲದಲ್ಲಿ ಮೊದಲಿನಿಂದಲೂ ಶ್ರೀವಿಠ್ಠಲನು ಪೂಜ್ಯನಾದ ದೇವನೆಂದು ಮನ್ನಣೆಯನ್ನು ಪಡೆದಿದ್ದನು. ೨. ನಿಜವೆಂದರೆ ಈ ಸಂಗತಿಯು ಹೇಳುವಂಥದಲ್ಲ. ಆದರೆ ನೀವು ಸಂತರು ಕೇಳಿದಿರೆಂದು ಹೇಳುತ್ತಿದ್ದೇನೆ. ೩. ಸಂಸಾರದ ದುಃಖದಿಂದ ತುಂಬ ನೊಂದುಕೊಂಡೆನು. ಕೊನೆಗೆ ನನ್ನ ತಾಯಿತಂದೆ ತೀರಿಕೊಂಡರು. ೪. ಬರದಿಂದ ಸಂಪತ್ತು ಹಾಳಾಯಿತು. ಗೌರವವು ಸಿಕ್ಕದಂತಾಯ್ತು. ಒಬ್ಬ ಮಡದಿಯು ಅನ್ನವಿಲ್ಲದೆ ಬಳಲಿ ಮಡಿದಳು. ೫. ಈ ದುಃಖದಿಂದ ತತ್ತರಿಸಿದೆನು. ನನಗೆ ತುಂಬ ನಾಚಿಕೆ ಎನ್ನಿಸತೊಡಗಿತು. ವ್ಯಾಪಾರದಲ್ಲೂ ನಷ್ಟವನ್ನು ಅನುಭವಿಸಹತ್ತಿದೆ. ೬. ಆಗ ಪಾಳುಬಿದ್ದ ದೇವರ ಗುಡಿಯ ಜೀರ್ಣೋದ್ಧಾರವನ್ನು ಮಾಡಬೇಕೆಂಬ ಆಸೆ ಮೂಡಿತು. ೭. ಮೊದಲ ಬಾರಿಗೆ ಏಕಾದಶಿಯ ದಿನದಂದು ಕೀರ್ತನೆಯನ್ನು ಮಾಡಲು ಆರಂಭಿಸಿದೆನು. ಆದರೆ ನಾನು ಅದನ್ನು ಅಭ್ಯಸಿಸಿರಲಿಲ್ಲ. ಅದರತ್ತ ಗಮನವಿರಲಿಲ್ಲ. ೮. ಹೀಗಾಗಿ ಗೌರವದಿಂದ ಮನದಲ್ಲಿ ನಂಬಿಕೆಯನ್ನಿರಿಸಿಕೊಂಡು ಕೆಲವು ಸಂತರ ಕೀರ್ತನೆಗಳ ಅವತರಣಿಕೆಗಳನ್ನು ಬಾಯಿಪಾಠ ಆಡಿಕೊಂಡೆನು. ೯. ಕೀರ್ತನೆಯ ಕಾಲಕೆ ದೇವರ ಗುಣಗಾನವನ್ನು ಮಾಡುವವರ ಬೆನ್ನುಹಿಂದೆ ನಿಂತುಕೊಂಡು ಧ್ರುಪದಗಳನ್ನು (ಪಲ್ಲವಿ) ಭಾವಶುದ್ಧ ಚಿತ್ತದಿಂದ ಅನ್ನುತ್ತಿದ್ದೆನು. ೧೦. ಸಂತರ ಪಾದತೀರ್ಥವನ್ನು ಸೇವಿಸುತ್ತಿದ್ದೆನು. ಅದರ ಬಗೆಗೆ ಎಳ್ಳಷ್ಟೂ ನಾಚಿಕೊಳ್ಳುತ್ತಿರಲಿಲ್ಲ. ೧೧. ಇನ್ನೊಬ್ಬರಿಗಾಗಿ ನನ್ನಿಂದಾದಷ್ಟು ಉಪಕಾರವನ್ನು ಮಾಡುತ್ತಿದ್ದೆನು. ಅದಕ್ಕಾಗಿ ನನ್ನ ದೇಹವನ್ನು ದುಡಿಯಲು ಹಚ್ಚುತ್ತಿದ್ದೆನು. ೧೨. ನನ್ನ ಬಳಗದವರ ಮಾತನ್ನು ನಿಜವೆಂದು ನಂಬದೆ ನಡೆದುಕೊಂಡೆನು. ನನಗೆ ಪ್ರಪಂಚದ ಬಗೆಗೆ ಎಲ್ಲಿಲ್ಲದ ಜುಗುಪ್ಸೆ ಬಂದಿತ್ತು. ೧೩. ನಿಜಸುಳ್ಳುಗಳ ಬಗೆಗೆ ನನ್ನ ಮನವನ್ನೇ ಸಾಕ್ಷಿಯೆಂದು ಒಪ್ಪಿಕೊಂಡೆನು. ಈ ಬಗೆಗೆ ನಾನೆಂದಿಗೂ ಬಹುಮತವನ್ನು ಒಪ್ಪಿಕೊಳ್ಳಲಿಲ್ಲ. ೧೪. ಗುರುವು ಕನಸಿನಲ್ಲಿ ಬಂದು ಮಾಡಿದ ಉಪದೇಶವನ್ನು ಸ್ವೀಕರಿಸಿ ಶ್ರೀಹರಿಯ ನಾಮವನ್ನು ದೃಢವಾಗಿ ನಂಬಿದೆನು. ೧೫. ಮುಂದೆ ನನಗೆ ಕವಿತೆಯನ್ನು ಮಾಡುವ ಸ್ಫೂರ್ತಿ ಬಂದಿತು. ನನ್ನ ಹೃದಯದಲ್ಲಿ ವಿಠ್ಠಲನ ಪಾದಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡೆನು. ೧೬. ಆಮೇಲೆ ಕೆಲವು ಜನರು ನನ್ನನ್ನು ನಿಷೇಧಿಸಿ ನನ್ನ ಮೇಲೆ ಆಘಾತವನ್ನು ಮಾಡಿದರು. ಅದರಿಂದ ನನ್ನ ಚಿತ್ತವು ನೊಂದುಕೊಂಡಿತು. ೧೭. ನನ್ನ ಅಭಂಗಗಳ ವಹಿಗಳನ್ನು ನದಿಯ ನೀರಿನಲ್ಲಿ ಮುಳುಗಿಸಲಾಯಿತು. ಆಗ ಹದಿಮೂರು ದಿನ ಈಶ್ವರನ ಬಳಿ ಧರಣಿಯನ್ನು ಹೂಡಿದೆನು. ಆಗ ನಾರಾಯಣನು ಆ ವಹಿಗಳನ್ನು ಕಾಪಾಡಿ ನನ್ನನ್ನು ಸಮಾಧಾನಪಡಿಸಿದನು. ೧೮. ನಡೆದ ಸಂಗತಿಗಳನ್ನೆಲ್ಲ ವಿಸ್ತಾರವಾಗಿ ಹೇಳುತ್ತ ಹೋದರೆ ತಡವಾಗುವುದು. ಅಲ್ಲದೆ ಬೇಡದ ಸಂಗತಿಗಳು ಬರುವ ಸಾಧ್ಯತೆಯಿದೆ. ಆದುದರಿಂದ ಇಲ್ಲಿಗೇನೇ ನಿಲ್ಲಿಸುತ್ತೇನೆ. ೧೯. ಈಗಿರುವ ಪರಿಸ್ಥಿತಿಯು ಸ್ಪಷ್ಟವಾಗಿ ಕಾಣುತ್ತಿದೆ. ಮುಂದಿನ ಅವಸ್ಥೆ ಆ ವಿಠ್ಠಲನಿಗೇ ಗೊತ್ತು. ೨೦. ನರಾಯಣನು ನನ್ನಂತಹ ಭಕ್ತನನ್ನು ಅದೆಂದಿಗೂ ಕಡೆಗಣಿಸನು. ಅವನು ಪೂರ್ತಿ ಕೃಪಾವಂತನೆಂಬುದು ನನಗೆ ತಿಳಿದಿದೆ. ೨೧. ಪಾಂಡುರಂಗನೇ ನನ್ನ ಇಡಿಯ ಬಂಡವಾಳ. ಅವನೇ ನನ್ನಿಂದ ಈ ಮಾತುಗಳನ್ನು ಆಡಿಸಿದನು.

      ತುಕೋಬರ ಗಾಥೆಯು ವಾಙ್ಮಯದ ಒಂದು ಮಹಾ ಕೃತಿಯಾಗಿದೆ. ಹೀಗಾಗಿ ಅದು ಮಾನವನ ವೈಶ್ವಿಕ ವಾಙ್ಮಯದ ವಾರಸಿನ ಒಂದು ಭಾಗವಾಗಿದೆ. ತುಕೋಬರ ಗಾಥೆಯು ಮರಾಠಿ ಸಂಸ್ಕೃತಿ ಹಾಗೂ ಮರಾಠಿ ಭಾಷೆಯ ವಿಶಿಷ್ಟವಾದ ಕಾಲದಲ್ಲಿ ನಿರ್ಮಾಣವಾಗಿದ್ದರೂ ಅದರ ಸಂದರ್ಭವು ವೈಶ್ವಿಕವೂ, ಮಾನವೀಯವೂ ಆದುದು. ತುಕೋಬರು ತಮ್ಮ ಅನುಭವಗಳನ್ನು ವೈಶ್ವಿಕ ಹಿನ್ನೆಲೆ ಇಲ್ಲವೆ ಸಾರ್ವಭೌಮವಾದ ಮಾನವೀಯ ಮಟ್ಟದಲ್ಲಿ ಪ್ರತಿಪಾದಿಸುತ್ತಾರೆ.

ದಿಲೀಪ ಪುರುಷೋತ್ತಮ ಚಿತ್ರೆ (’ಪುನ್ಹಾ ತುಕಾರಾಮ’)
[] [] []