ಕರ್ನಾಟಕ
 

ವಿಶ್ವಕೋಶ್

ಮುನ್ನುಡಿಯಿ
ಚರಿತ್ರೆ
ಕಥೆಗಳು
ಮಕ್ಕಳಿಗಾಗಿ
ಸಮೀಕ್ಷೆ
ಬಹಿಣಾಬಾಯಿ
 
ಮಹಾತ್ಮಾ
 ಗಾಂಧೀ
ಬ್ರೆಲ್
 
Feedback
Home
 

Font Problem

 

"ಸಂತ ತುಕಾರಾಮರ ಚರಿತ್ರೆ"ಯ ‘ e-ಕಿರಿಪುಸ್ತಕ’ವನ್ನು ಕುರಿತು ಶ್ರೀ ಜಯಂತ ಕೈಕಿಣಿಯವರು ಕೈಕೊಂಡ ಸಮೀಕ್ಷೆ

 

ತಿಳಿವಿನ ಸಿಂಚನ

ಸತ್ಯದ ಆಳವಾದ ಅನುಭೂತಿಯ ಪರಮ ನೆಲೆಯಾಗಿರುವ ಆಧ್ಯಾತ್ಮದ ಮಾರ್ಗದಲ್ಲಿ ಅಂತರಂಗ ಮತ್ತು ಬಹಿರಂಗಗಳನ್ನು ಅಭಿನ್ನವಾಗಿ ಅನುಭವಿಸಿ ದಿವ್ಯವಾದ ಬೆಳಕನ್ನು ಕಂಡು, ಕಾಣಿಸಿದ ಸಂತ ತುರಾಕಾಮರ ಬಾಳಿನ ಕಥನವನ್ನು ತಿಳಿಯಾಗಿ ಅಷ್ಟೇ ತಿಳಿವಿನಿಂದ ತಿಳಿಸುವ ಅಪರೂಪದ ಪುಸ್ತಿಕೆ ಇದು.

ಕೇವಲ ಪವಾಡಗಳ ವರ್ಣನೆ ಮಾಡಿ ಸಂತರ ಬದುಕನ್ನು ನಮ್ಮಿಂದ ದೂರ ನಿಲ್ಲಿಸುವ ಬಗೆ ಒಂದಾದರೆ, ಅವರನ್ನು ಮನುಷ್ಯ ಸಹಜ ಸಾಧ್ಯತೆಗಳಾಗಿ ಪರಿಭಾವಿಸಿ ಅವರ ವಿಕಾಸ ಪಥವನ್ನು ಮಾನವೀಯ ಕಣ್ಣುಗಳಿಂದ ನೋಡುವ ಬಗೆ ಇನ್ನೊಂದು. ಶ್ರೀಧರ ಮಹಾರಾಜ ದೇಹೂಕರ ಅವರು ರಚಿಸಿದ ತುಕಾರಾಮರ ಈ ಸಂಕ್ಷಿಪ್ತ ಚಿತ್ರ - ಎರಡನೆಯ ಬಗೆಯದು. ಕಳಕಳಿ, ಕರುಣೆ ಮತ್ತು ನಿತ್ಯ ಸಂಸಾರದ ನಟ್ಟನಡು ಅರಳಿದ ಭಕ್ತಿಯ ಕಣ್ಣುಗಳಿಂದ ತುಕಾರಾಮರನ್ನು ಮನಗಾಣುವ ಈ ಪುಟ್ಟ ಕಥನದ ಬಳ್ಳಿ ಸಂತ ತುಕಾರಾಮರ ಉಜ್ವಲ ಸಾಲುಗಳನ್ನೇ ಇಂಬಾಗಿಸಿಕೊಂಡು ಚಿಗುರುತ್ತದೆ.

ತುಕಾರಾಮರ ಕುಟುಂಬದ ಹಿರೀಕರ ಪೂರ್ವವೃತ್ತಾಂತ, ತುಕಾರಾಮರ ಕಾಲದ ಸಾಮಾಜಿಕ ಸ್ಥಿತಿಗಳ ಜತೆ ಇನ್ನೆಲ್ಲೂ ನಮಗೆ ದೊರಕದ ಅಪರೂಪದ ವಿವರಗಳು ಇಲ್ಲಿವೆ. ತುಕಾರಾಮರ ಧೃಪದ ಮೇಳದಲ್ಲಿದ್ದ ೨೫೦ ಸದಸ್ಯರ ಮಾಹಿತಿಯೂ ಇಲ್ಲಿದೆ. ಬರ ಬಂದಾಗ ಬಡಬಗ್ಗರಿಗೆ ತಾವು ಹಂಚಿದ ಸಾಲದ ಸಾಲಪತ್ರಗಳನ್ನು ಅವರು ನದಿ ನೀರಿನಲ್ಲಿ ಮುಳುಗಿಸಿದ ಕ್ಷಣ ಅವರ ಆತ್ಮ ಸಾಕ್ಷಾತ್ಕಾರದ ಪಯಣದ ಮೊದಲ ಮಜಲಾಗಿದೆ. ಶಿವಾಜಿ ಮತ್ತು ತುಕಾರಾಮರ ಮುಖಾಮುಖಿ ಅತ್ಯಂತ ಸೂಕ್ಷ್ಮ ಐತಿಹಾಸಿಕ ಕ್ಷಣವಾಗಿದೆ. ಇಂಥ ಅನೇಕ ಮನಮುಟ್ಟುವ ಸಂಗತಿಗಳ ಮೂಲಕ ಚಿತ್ರಿತವಾಗಿರುವ ಈ ಸಂತ ಕಥನಕ್ಕೆ ಪುರಾಣದ ಪ್ರಭೆಯೂ, ಇತಿಹಾಸದ ಸತ್ಯನಿಷ್ಠತೆಯೂ ಒಟ್ಟಿಗೇ ಪ್ರಾಪ್ತವಾಗಿದೆ.

ಇದನ್ನು ಪ್ರೀತಿಯಿಂದ ಕನ್ನಡಿಸಿರುವ ವಿರೂಪಾಕ್ಷ ಕುಲಕರ್ಣಿ ಅವರ ಶೈಲಿ ಮೂಲದ ಚಿತ್ರವತ್ತತೆಯನ್ನು ಇನ್ನೂ ಹೊಳೆಸುವಷ್ಟು ಪಾರದರ್ಶಕವಾಗಿದೆ, ಆಪ್ತವಾಗಿದೆ. ತಾನು-ಪರರೆಂಬ ಭಾವಗಳನ್ನು ಇಲ್ಲವಾಗಿಸುವ ದೇವೀ ಪ್ರೇಮದ ಅನುಪಮ ಆನಂದವನ್ನು ಹಂಚಿಕೊಳ್ಳುವ ಅವರ ಬರವಣಿಗೆಗೆ ವಿಶಿಷ್ಟ ಕಾಂತಿ ಇದೆ. ಜಾತಿ, ಮತ, ಧರ್ಮಗಳ ಹೆಸರಲ್ಲಿ ಹೋಳಾಗಿ, ಹಿಂಸೆ, ವಿಕೃತಿಗಳ ನರಕವಾಗಿರುವ ಇಂದಿನ ಮನುಷ್ಯ ಲೋಕಕ್ಕೆ ಅತ್ಯಂತ ಅಗತ್ಯವಿರುವ ತಿಳಿವಿನ ಅಮೃತ ಸಿಂಚನದ  ಸಂತ ಕಥನವನ್ನು ಶ್ರದ್ಧೆಯಿಂದ, ಪರಿಣತಿಯಿಂದ ಕನ್ನಡಕ್ಕೆ ತಂದಿರುವ ವಿರೂಪಾಕ್ಷ ಕುಲಕರ್ಣಿ ಅವರಿಗೆ ಆಭಾರಪೂರ್ವಕ ಅಭಿನಂದನೆಗಳು. ಈ ಕಥನದ ಅಲೌಕಿಕವಾದ ಹೆಚ್ಚು ಹೆಚ್ಚು ಹೃದಯಗಳನ್ನು ತಲುಪಿ ನಿಷ್ಕಾರಣ ಪ್ರೀತಿಯ ರಾಗವನ್ನು ಪಸರಿಸಲಿ ಎಂದು ಹಾರೈಸುವೆ. ಯರವಡಾ ಜೈಲಿನಲ್ಲಿದ್ದಾಗ ಗಾಂಜಿಯವರು ತುಕಾರಾಮರ ಅಭಂಗಗಳನ್ನು ಅನುವಾದಿಸುವುದರಲ್ಲಿ ನಿರತರಾಗಿದ್ದರು ಎಂಬುದನ್ನು ನಾವಿಂದು ನೆನೆಯಲೇಬೇಕಾಗಿದೆ.

                                                                                                - ಜಯಂತ ಕಾಯ್ಕಿಣಿ